ಹಚ್ಕೊಂಡ್ ಮಾತಾಡೋರು
ನಾನೇನು ಅಂತಹ ಮಾತುಗಾರನೇನಲ್ಲ. ಬಹಳಷ್ಟು ಸಲ ನನ್ನ ಪಾಡಿಗೆ ನಾನು ಇದ್ದುಬಿಡುತ್ತೇನೆ ಆದರೆ ಕೆಲವೊಮ್ಮೆ ಹೀಗೆ ನನಗೇ ಆಶ್ಚರ್ಯವಾಗುವಂತೆ ಮಾತನಾಡುತ್ತೇನೆ.
“ನಿನ್ಗತೇ ಹಚ್ಕೊಂಡ ಮಾತಾಡೋರ್ ಭಾಳ್ ಕಮ್ಮಿ ನೋಡ್ ಅಪ್ಪಿ” ಬಸ್ಸು ಇನ್ನೇನು ಅಥಣಿ ತಲುಪಲು ಐದು ನಿಮಿಷ ಇರುವಾಗ ನನ್ನ ಪಕ್ಕದಲ್ಲಿ ಕೂತಿದ್ದ ಅವರು ಮೌನವನ್ನು ಮುರಿಯುತ್ತ ಎಂದರು. ವಿಜಯಪುರದಿಂದ ಇಲ್ಲಿಯವರೆಗೆ ಅವರ ಜೊತೆ ಅದೂ ಇದೂ ಮಾತನಾಡುತ್ತ ಬಂದಿದ್ದೆ. ಆಗತಾನೆ ಊರು ಹತ್ತಿರವಾಯಿತೆಂದು ಮಾತನಾಡುವುದು ನಿಲ್ಲಿಸಿದ್ದೆ. ಈ ಹಂತದಲ್ಲಿ ಮಾತುಗಳು ಹುಟ್ಟಿದರೆ ಅವು ಪೂರ್ಣವಾಗುವುದಿಲ್ಲ ಎಂದು. ಅವರ ಮೊಬೈಲಿನಲ್ಲಿ ಚಾರ್ಜ್ ಖಾಲಿಯಾಗಿದ್ದರಿಂದ ನನ್ನ ಮೊಬೈಲಿನಿಂದ ಅವರ ಮಗನಿಗೆ ಫೋನ್ ಮಾಡಿದ್ದರು. ಮಗ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ. ಬಸ್ ಸ್ಟ್ಯಾಂಡಿನಲ್ಲಿ ನಾವು ಇಳಿಯುವುದು ಸ್ವಲ್ಪ ಹಿಂದೆ ಮುಂದೆ ಆಯಿತು. ಅವರು ಇಳಿಯುವವರೆಗೆ ಕಾಯ್ದು ಅವರನ್ನು ಅವರ ಮಗನ ಹತ್ತಿರ ಬಿಟ್ಟು ಬಿಳ್ಕೊಟ್ಟು ನನ್ನನ್ನು ಕರೆಯಲು ಬರುತ್ತಿದ್ದ ಗೆಳೆಯನಿಗಾಗಿ ಕಾಯುತ್ತ ನಿಂತೆ, ಅದುವರೆಗೆ ನಡೆದ ಸಂಭಾಷಣೆಯನ್ನು ಮೆಲುಕು ಹಾಕುತ್ತ.
ಅವತ್ತು ವಿಜಯಪುರ ಬಸ್ ಸ್ಟ್ಯಾಂಡ್ ತಲುಪಿದಾಗ ಸುಮಾರು ಐದು ಗಂಟೆ ಆಗಿತ್ತು. ಇಂಡಿಯಲ್ಲಿ ಗೆಳೆಯನೊಬ್ಬನ ಮದುವೆ ಮುಗಿಸಿಕೊಂಡು ಊರಿಗೆ ಬಸ್ ಹತ್ತಲು ಬಂದಿದ್ದೆ. ನಾನು ಚಿಕ್ಕೊಡಿಗೆ ಹೋಗಬೇಕಿತ್ತು. ಚಿಕ್ಕೊಡಿಯ ಬಸ್ಸು ಸಿಗದಿದ್ದರೂ ಕೊನೆಯ ಪಕ್ಷ ಬೆಳಗಾಂವಿಯ ಬಸ್ಸಾದರೂ ಸಿಗುತ್ತದೆಂದು ಕಾಯುತ್ತ ನಿಂತಿದ್ದೆ. ಒಂದರ್ಧ ತಾಸು ಕಾಯ್ದೆ, ಯಾವ ಬಸ್ಸಿನ ಸುಳಿವು ಸಿಗಲಿಲ್ಲ. ವಿಚಾರಿಸಿದಾಗ ಗೊತ್ತಾಗಿದ್ದು ಚಿಕ್ಕೊಡಿಗೆ ಬಿಡಿ ಬೆಳಗಾಂವಿಗೂ ಬಸ್ಸು ಇರಲಿಲ್ಲ. ಜಿಲ್ಲೆಯಿಂದ ಜಿಲ್ಲೆಗೆ ಐದರ ನಂತರ ಬಸ್ಸು ಇರದಿರುವುದು ಆಶ್ಚರ್ಯ ಹುಟ್ಟಿಸಿತು. ಮನಸಲ್ಲೇ ಬೈಯ್ದುಕೊಂಡೆ. ನನ್ನ ಮುಂದೆ ಆಯ್ಕೆಗಳಿರಲಿಲ್ಲ. ನನ್ನೂರಿಗೆ ಸಮೀಪವಾಗುವ ಯಾವುದಾದರೂ ಬಸ್ ಸಿಕ್ಕರೆ ಹೋಗುವುದು ಇಲ್ಲದಿದ್ದರೆ ವಿಜಯಪುರದಲ್ಲೇ ವಸ್ತಿ ಇದ್ದು ಮುಂಜಾನೆ ಹೋಗುವುದು ಎಂದು ನಿರ್ಧರಿಸಿದೆ.
ಹಾಗೆ ನಿರೀಕ್ಷೆಯಿಟ್ಟು ಕಾಯುತ್ತಿದ್ದವನಿಗೆ ಕಂಡಿದ್ದು ಅಥಣಿ ಬಸ್ಸು. ಅದು ಬಂದು ನಿಂತೋಡನೆ ಹಿಂದೆ ಮುಂದೆ ನೋಡದೆ ಏರಿ ಬಿಟ್ಟೆ. ಅಥಣಿಯ ಗೆಳೆಯನಿಗೆ ಫೋನ್ ಮಾಡಿ ಅಲ್ಲಿ ಲಾಡ್ಜ್ ಅದು ಏನಾದರೂ ಇವೆಯಾ ಎಂದು ಆಮೇಲೆ ವಿಚಾರಿಸಿದೆ. ಹಾಗೆ ಬಸ್ಸಿನ ಕಿಟಕಿಯ ಸೀಟಿನಲ್ಲಿ ಕೂತು ಮುಂದೆ ಏನು ಮಾಡುವುದು ಎಂದು ಯೋಚಿಸುತ್ತಿದ್ದಾಗಲೇ ಅವರು ಕಂಡಿದ್ದು, ಕಿಟಕಿಯ ಹತ್ತಿರ. ಅವರು ನನ್ನ ಕೈಗೆ ಒಂದು ಕರವಸ್ತ್ರ ಕೊಟ್ಟು ಜಾಗ ಹಿಡಿ ಎಂದರು. ನಾನು ಆ ಕರವಸ್ತ್ರವನ್ನು ನನ್ನ ಪಕ್ಕದ ಸೀಟಿನಲ್ಲಿ ಇಟ್ಟೆ. ಇಂದಿಗೂ ಈ ವಿಧಾನ ಎಷ್ಟು ಪರಿಣಾಮಕಾರಿ ಎಂದು ಯೋಚಿಸಿದರೆ ಆಶ್ಚರ್ಯವಾಗುತ್ತದೆ.
ಅವರು ಬಂದು ಕೂತೊಡನೇ
“ಎಲ್ಲಿ ಹೊಂಟಿ ಅಪ್ಪಿ” ಎಂದು ಕೇಳಿದರು
“ಅಥಣಿಗೆ ಹೊಂಟೇನ್ರಿ” ಎಂದೆ
“ಇಲ್ಲೇನ್ ಕೆಲ್ಸ ಇತ್ತೇನ್ ಅಪ್ಪಿ”
“ಹಾ ರೀ ದೊಸ್ತಂದ ಮದ್ವಿ ಇತ್ರಿ. ಚಿಕ್ಕೊಡಿಗೆ ಹೋಗ್ಬೇಕಿತ್ರಿ ಆದ್ರ ಯಾವ ಬಸ್ಸ ಇಲ್ರಿ. ಅಥಣಿಮಟ ಹೋಗಿ ಆಕಡೆ ಏನರೇ ನೋಡಬೇಕ್ರಿ”
“ಹೌದೇನ್ ಅಪ್ಪಿ, ಇಲ್ಲಿಂದ ಚಿಕ್ಕೊಡಿಗೆ ಬಸ್ ಕಡಿಮಿನs ಬಿಡ್” ಎಂದು ಸುಮ್ಮನಾದರು.
ಕೆಲ ಕ್ಷಣಗಳ ನಂತರ ಮೌನ ಮುರಿದು “ನಾವ್ ಸ್ವಾಮಿಗೋಳ್ ಪಕಿ” ಎಂದರು. ಅವರು ಪರೋಕ್ಷವಾಗಿ ನನ್ನ ಜಾತಿಯನ್ನು ಕೇಳುತ್ತಿದ್ದಾರೆ ಎಂದು ಗೊತ್ತಾಗಿ ನನ್ನ ಜಾತಿ ಉಪಾಜಾತಿ ಎಲ್ಲ ಹೇಳಿದೆ. ಅದೇನೋ ಗೊತ್ತಿಲ್ಲ ಹೀಗೆ ಭೇಟಿಯಾಗುವ ಬಹುತೇಕರು ಒಂದಿಲ್ಲ ಒಂದು ಹಂತದಲ್ಲಿ ಜಾತಿಯನ್ನು ಮಾತಿನಲ್ಲಿ ತರುತ್ತಾರೆ. ಇಲ್ಲದಿದ್ದರೆ ಆ ಮಾತುಕತೆಗೆ ಒಂದು ಅರ್ಥವೇ ಇಲ್ಲ ಎಂದು ಭಾವಿಸುತ್ತಾರೆ.
“ವಿಜಾಪುರಕ ಏನ್ ಮಾಡಾಕ ಬಂದಿದ್ರಿ” ಎಂದು ಕೇಳಿದೆ
“ಇಲ್ಲಿ ಎಲ್ಲ ನಮ್ಮ ಸಂಬಂಧಿಕರ ಅದಾರ್ ಅಪ್ಪಿ. ನೊಡ್ಕೊಂಡ್ ಹೋಗಾಕ ಬಂದಿದ್ನಿ. ಹಂಗ ಎಲ್ಲಾರ್ನೂ ಮಾತಾಡ್ಸಿ ಬರಬೇಕಾದ್ರ ಲೇಟ್ ಆತ ನೋಡ್”
“ಹೌದೇನ್ರಿ..ಹಂಗಂದ್ರ ಆಗಾಗ ಬರ್ತಿತೇರಿ ಈಕಡೆ”
“ಹಾ ವಾರದಾಗ ಒಂದ್ಸಲ ಬಂದ ಹೋಗತೇನಿ”
ನಂತರ ಮತ್ತೆ ಮೌನ ಆವರಿಸಿತು. ಕೆಲ ನಿಮಿಷಗಳ ನಂತರ ಅವರು ಮೌನ ಮುರಿದು ನಾನೇನು ಕೆಲಸ ಮಾಡುತ್ತೇನೆ, ನನ್ನ ಸಂಬಳ ಎಷ್ಟು, ನಾವೇಷ್ಟು ಜನ (ಮಕ್ಕಳು), ಅಪ್ಪ ಅವ್ವಾ ಏನು ಮಾಡುತ್ತಾರೆ, ಹೊಲ ಎಷ್ಟಿದೆ ಎಂದೆಲ್ಲ ಕೇಳಿ ತಿಳಿದುಕೊಂಡರು.
“ಎಷ್ಟ್ ಮಕ್ಕಳ್ರಿ ನಿಮಗ” ಎಂದು ಕೇಳಿದೆ
“ಮೂರು ಮಕ್ಕಳ ಪಾ. ದೊಡ್ಡಾಂವಗ ಮದುವಿ ಆಗಿ ಎರಡ್ ಮಕ್ಕಳ ಆಗಿದಾವ್. ಸಣ್ಣಾಂವ ಬೆಂಗಳೂರಾಗ ನಿನ್ಗತೆ ಕಂಪ್ಯೂಟರ್ ಮ್ಯಾಗ ಕೆಲ್ಸಾ ಮಾಡ್ತಾನ. ನಡುಕಿನಾಕಿ ಬಿಎಡ್ ಮುಗಿಸಿ ಕಲ್ಸಾಕ ಹೋಗ್ತಾಳ್” ಎಂದರು
“ಹೊಲ ಐತೇನ್ರಿ?”
“ಹೂ ಒಂದ್ ಐದ್ ಏಕರೆ ಐತಿ ಪಾ.”
“ಎಲ್ಲಾ ನೀರಾವರಿನರಿ?”
“ಹಾ ಎಲ್ಲಾ ನೀರಾವರಿ ಐತಿ ಆದ್ರ ಏನ್ ಮಾಡ್ತಿ ಈ ಹೊಲದಾಗಿನ ಕೆಲ್ಸಾ ಯಾರಿಗ್ ನೀಗವಾತ ಈಗ. ಆಳಗೋಳ್ ಪಗಾರ ಬ್ಯಾರೆ ಭಾಳ್ ತುಟ್ಟಿ”
“ಯಾರಿಗೇರೆ ಪಾಲಲೇ ಹಚ್ಚಬೇಕಲ್ರಿ. ನಮ್ದೂ ಎರಡು ಏಕರೆ ಬ್ಯಾರದವರಿಗೆ ಹಚ್ಚೇವಿ ನೋಡ್ರಿ ನಮಗ ನೀಗದಾರಕ”
“ನಮ್ಮ ದೊಡ್ಡಾಂವ ಹುಡುಗ ಮಾಡ್ತಾನ್ ಪಾ ಎಲ್ಲಾ ಈಗ. ಮುಂದ್ ನೋಡಬೇಕ್. ಕಬ್ಬಗೋಳ್ ಕಡ್ಯಾಕ್ ಬಂದಾವು ಈಗ ಅವಂಗೂ ಭಾಳ್ ಗೊತ್ಯಿ ಆಗೇತಿ ನೋಡ್”
“ಹಂಗs ನೋಡ್ರಿ ಒಬ್ರ ಅದ್ರs ಭಾಳ್ ಗೊತ್ಯಿ ಆಗ್ತೇತಿ”
ಮತ್ತೆ ಮೌನ ಇವರಿಸಿತು. ನಡುವೆ ಕಂಡಕ್ಟರ್ ಬಂದು ಟಿಕೆಟ್ ಕೊಟ್ಟ. ಅದಾದ ಮೇಲೆ ಮೌನ ಹಾಗೆ ಮುಂದುವರೆಯಿತು. ಬಸ್ಸು ಸ್ವಲ್ಪ ಮುಂದೆ ಹೋದ ಮೇಲೆ ನಿಂತು ಬಿಟ್ಟಿತು. ಯಾವುದೋ ಕಾರಣಕ್ಕೆ ಟ್ರಾಫಿಕ್ ಆಗಿತ್ತು.
ಸ್ವಲ್ಪ ಸಮಯದ ನಂತರ ನಾನು ಮೌನ ಮುರಿದು
“ನಿಮ್ಮ ಮಗಳು ಎಲ್ಲಿ ಕಲಸ್ತಾರ್ರಿ” ಎಂದು ಕೇಳಿದೆ
“ಆಕಿ ಹಾಸ್ಟೇಲ್ ದಾಗ ವಾರ್ಡನ್ ಅದಾಳ್ ಪಾ. ತಿಂಗಳಿಗೆ ಹದನೈದು ಸಾವಿರ ಪಗಾರ” ಎಂದು ಮುಂದುವರೆಸಿದರು. ಮಗಳ ಮೇಲೆ ಬಹಳ ಪ್ರೀತಿ ಮತ್ತು ಅಭಿಮಾನ ಇತ್ತು. ಮುಂದಿನ ಬಹಳಷ್ಟು ಸಮಯ ಅವಳ ಬಗ್ಗೆಯೇ ಹೇಳಿದರು. ಅವಳಿಗೆ ಗಂಡು ನೋಡುತ್ತಿರುವುದಾಗಿಯೂ ಆದರೆ ಯಾವುದೇ ಒಳ್ಳೆಯ ಮನೆತನ ಸಿಗುತ್ತಿಲ್ಲ ಎಂದು ಬೇಜಾರು ಪಟ್ಟರು.
“ಸ್ವಲ್ಪ ಲೇಟ್ ಆದ್ರೂ, ಚೊಲೋ ಮನೆತನ ನೋಡಿ ಕೊಡ್ರಿ” ಎಂದು ನನ್ನ ವಯಸ್ಸಿಗೆ ಮೀರಿದ ಸಲಹೆ ಕೊಟ್ಟೆ.
“ನಾನೂ ಅದ ಅನ್ನಾಕತ್ತೇನಿ, ಆದ್ರ ನಮ್ಮ ದೊಡ್ಡ ಹುಡುಗ ವಯಸ್ ಆಗೇತಿ ದವಡ ಮದ್ವಿ ಮಾಡ್ಬೇಕಂತ ಅವಸರ ಮಾಡಾಕತ್ತಾನ” ಎಂದರು. ಹಾಗೆ ಮುಂದುವರೆದು ಮಗಳು ಮೊನ್ನೆ ಬಸ್ ಸ್ಟ್ಯಾಂಡಿನಲ್ಲಿ ಒಬ್ಬ ಜೀವ ಹೋಗುತ್ತಿರುವ ಅಜ್ಜನನ್ನು ರಕ್ಷಿಸಿದ ಬಗ್ಗೆ, ಹಾಸ್ಟೆಲ್ಲಿನ ಹುಡುಗರು ಅವಳನ್ನು ಎಷ್ಟು ಹಚ್ಚಿಕೊಂಡಿದ್ದಾರೆ ಎಂಬುದರ ಬಗ್ಗೆ, ಪಂಚಾಯತಿ ಕೆಲಸದಲ್ಲಿ ಅವಳ ಸಹಾಯದ ಬಗ್ಗೆ ಹೇಳಿಕೊಂಡರು. ನಾನು ಎಲ್ಲವನ್ನು ಗಮನವಿಟ್ಟು ಕೇಳಿದೆ.
“ನೀವ್ ಪಂಚಾಯಿತಿ ಒಳಗ ಕೆಲಸ ಮಾಡ್ತೇರಿ?” ಸಂಶಯ ಬಂದು ಕೇಳಿದೆ
“ನಾ ಪಂಚಾಯತಿ ಛೇರ್ಮನ್ ಅದಿನಿ ಅಪ್ಪಿ” ಎಂದರು. ಇದುವರಗೆ ಅವರು ಹಳ್ಳಿಯಲ್ಲಿ ಕೆಲಸ ಮಾಡಿ ಬದುಕುವ ಒಬ್ಬ ಸಾಮಾನ್ಯ ಮಹಿಳೆ ಎಂದುಕೊಂಡಿದ್ದ ನನಗೆ ಅವರು ಪಂಚಾಯತಿ ಛೇರ್ಮನ್ ಅಂತ ತಿಳಿದು ಆಶ್ಚರ್ಯವಾಯಿತು. ಅದರ ಕುರಿತೇ ಸ್ವಲ್ಪ ಮಾತನಾಡಿದೆ. ನಡುವೆ ನೀ ಯಾವ ಪಕ್ಷಕ್ಕೆ ವೋಟ್ ಹಾಕ್ತಿ ಅಂತ ಕೇಳಿದರು. ನಾ ಹೇಳಿದ ಉತ್ತರ ಅವರಿಗೆ ಸಮಾಧಾನ ತರಲಿಲ್ಲ ಎಂಬುದನ್ನು ಅರಿತು ತಕ್ಷಣ ಇನ್ನೊಂದು ಪಕ್ಷದ ಹೆಸರು ಹೇಳಿ ಸುಮ್ನ ಜೋಕ್ ಮಾಡಿದೆ ಅಂತ ನೆಪ ಹೇಳಿ ಆ ಪಕ್ಷವನ್ನು ಹೊಗಳಿದೆ. ಅವರು ಖುಷಿಯಾದರು. ನನಗೆ ಬೇಕಾಗಿದ್ದು ಅಷ್ಟೇ. ಇದುವರೆಗೆ ನಡೆದ ಒಂದು ಉತ್ತಮ ಸಂಭಾಷಣೆಯನ್ನು ಯಾವುದೊ ಒಂದು ಪಕ್ಷದ ಸಲುವಾಗಿ ನನಗೆ ಹಾಳು ಮಾಡಿಕೊಳ್ಳಲು ಇಷ್ಟವಿರಲಿಲ್ಲ. ಅಷ್ಟೊತ್ತಿಗೆ ಅಥಣಿ ಸಮೀಪ ಬಂದಿದ್ದೆವು.
“ನೋಡ್ ಅಪ್ಪಿ, ಲೇಟ್ ಆಗೇತಿ ನಮ್ಮ್ ಮನಿಗೆ ಬಂದ್ಬಿಡ್, ಹರೇವತ್ ನನ್ನ ಮಗ ಬಸ್ ಸ್ಟ್ಯಾಂಡ್ ತಕ ತಂದ ಬಿಡ್ತಾನ್” ಎಂದರು
“ಇಲ್ರಿ ದೋಸ್ತ ಬರಾತಾನ್ರಿ ಕರ್ಯಾಕ” ಎಂದೆ.
ಅದಾದ ನಂತರ ಆವರಿಸಿದ ಮೌನ ಬಹಳ ಹೊತ್ತು ಉಳಿಯಿತು. ನಾನೇನು ಅಂತಹ ಮಾತುಗಾರನೇನಲ್ಲ. ಬಹಳಷ್ಟು ಸಲ ನನ್ನ ಪಾಡಿಗೆ ನಾನು ಇದ್ದುಬಿಡುತ್ತೇನೆ ಆದರೆ ಕೆಲವೊಮ್ಮೆ ಹೀಗೆ ನನಗೇ ಆಶ್ಚರ್ಯವಾಗುವಂತೆ ಮಾತನಾಡುತ್ತೇನೆ. ಎಲ್ಲರಿಗೂ ಹೇಳಿಕೊಳ್ಳಲು ಏನೋ ಒಂದು ಸಂತೋಷ, ದುಃಖ ಇತ್ಯಾದಿ ಇದ್ದೆ ಇರುತ್ತದೆ. ನಾವು ಕಿವಿಯಾಗಬೇಕು ಅಷ್ಟೇ. ಬಸ್ಸಿನಿಂದ ಇಳಿಯುವ ಮುಂಚೆ ಅವರು ಅಂದ ಮಾತು “ನಿನ್ಗತೇ ಹಚ್ಕೊಂಡ ಮಾತಾಡೋರ್ ಭಾಳ್ ಕಮ್ಮಿ ನೋಡ್ ಅಪ್ಪಿ” ಬಹಳ ಕಾಡಿತು. ನಾವು ಇಷ್ಟೊಂದು ಏಕಾಂಗಿಗಳಾಗಿದ್ದೇವಾ?
ಪದಗಳ ಅರ್ಥ:
ಗೊತ್ಯಿ: ಕಷ್ಟ
ನೀಗದಾರಕ: ಆಗದ್ದಕ್ಕೆ
ಪಗಾರ್: ಸಂಬಳ
ವಸ್ತಿ: ವಾಸ್ತವ್ಯ
ದವಡ: ಬೇಗ
ಮಟ/ತಕ: ತನಕ




ಓದ್ಕೊಂತ್ ನಾವು ವಿಜಯಪುರದಿಂದ ಅಥಣಿಗೆ ಹೋದಂಗ್ ಅನಸ್ತ ನೋಡ್ರಿ ... ಚಂದ ಬರದಿರಿ... ನಿಮ್ಮ ಬರವಣಿಗೆ ಹಿಂಗ್ ಮುಂದ್ ವರಿಲ್ರಿ ...
Liked