ದುಡ್ಡು
ನಗರ ದೊಡ್ಡದಾದಂತೆ ಶೋಷಣೆಯ ವಿಧಾನಗಳೂ ಬದಲಾಗುತ್ತವೆಯೇ?
ಆಫೀಸಿನಿಂದ ಹೊರಬಿದ್ದಾಗ ರಾತ್ರಿಯ ಎಂಟು ಗಂಟೆ ದಾಟಿತ್ತು. ಆಫೀಸಿನ ಗೇಟು ದಾಟಿ ರಸ್ತೆಯ ಬದಿಯಲ್ಲಿ ನಿಂತೆ. ಅಲ್ಲಿ ಆಗಲೇ ನಾಲ್ಕೈದು ಜನ ನಿಂತಿದ್ದರು. ಎಲ್ಲರೂ ವೇಗವಾಗಿ ಸುಯ್ಯ ಸುಯ್ಯ ಅಂತ ಚಲಿಸುತಿದ್ದ ವಾಹನಗಳ ದಟ್ಟಣೆ ಕಡಿಮೆಯಾಗಲು ಕಾಯುತ್ತಿದ್ದರು. ವಾಹನಗಳ ಸಂಚಾರದಲ್ಲಿ ಸ್ವಲ್ಪ ಬಿಡುವು ಸಿಕ್ಕರೆ ಸಾಕು ಜನ ಕೈ ಅಡ್ಡಹಿಡಿದು ರಸ್ತೆ ದಾಟುತ್ತಾರೆ. ಕೆಲವೊಮ್ಮೆ ವೇಗವಾಗಿ ಬರುತ್ತಿರುವ ಗಾಡಿಗಳನ್ನೇ ತಡೆಯುತ್ತಾರೆ. ಹೀಗೆ ಅವರ ಜೊತೆ ನಾನೂ ರಸ್ತೆ ದಾಟುತ್ತೇನೆ. ನನಗೆ ವಾಹನಗಳ ಚಲನೆಯಲ್ಲಿನ ಬಿಡುವ ಸರಿಯಾಗಿ ಕಂಡರೆ ಮಾತ್ರ ರಸ್ತೆ ದಾಟುತ್ತೇನೆ. ಬಹಳಷ್ಟು ಸಲ ಬೇರೆಯವರ ಹಿಂದಿನಿಂದ ರಸ್ತೆ ದಾಟುತ್ತೇನೆ. ಸತ್ತರೆ ಅವರು ಮೊದಲು ಸಾಯುತ್ತಾರೆ ಎಂಬ ಧೈರ್ಯದಿಂದ ಅಥವಾ ಸ್ವಾರ್ಥದಿಂದ.
ಇದೇ ರೀತಿ ನಾನು ಎರಡು ರಸ್ತೆಗಳನ್ನು ದಾಟಿದ ಮೇಲೆ ನನ್ನ ರೂಮಿಗೆ ಹೋಗುವ ರಸ್ತೆ ಸಿಗುತ್ತದೆ. ಎರಡೂ ಕಡೆ ರಸ್ತೆ ದಾಟಿಸುವ ಜನ ಸಿಕ್ಕೇ ಸಿಗುತ್ತಾರೆ. ಎರಡನೇ ರಸ್ತೆ ದಾಟುವುದು ಸ್ವಲ್ಪ ಸರಳ ಮೊದಲನೆಯದಕ್ಕೆ ಹೋಲಿಸಿದರೆ. ಎರಡನೆಯದನ್ನು ನಾನೇ ದಾಟುತ್ತೇನೆ, ಬಹಳಷ್ಟು ಸಲ. ಇವತ್ತು ಜನರ ಜೊತೆಗೂಡಿ ರಸ್ತೆ ದಾಟಿ ಎರಡನೆಯ ರಸ್ತೆಗೂ ಮತ್ತು ಮೊದಲ ರಸ್ತೆಗೂ ಇರುವ ಖಾಲಿ ಜಾಗದಲ್ಲಿ ನಿಂತಾಗ ಅವನು ಕಂಡ. ನೋಡಲು ಹಳ್ಳಿಯವನ ತರ ಇದ್ದ. ಹೆಗಲಿಗೆ ಬ್ಯಾಗು ಹಾಕಿದ್ದ. ನನ್ನ ಮುಂದೆ ಬಂದು ನಿಂತವನೇ ಹಿಂದಿ ಬರುತ್ತಾ ಅಂತಾ ಕೇಳಿದ. ನಾನು ಏನೋ ಸಮಸ್ಯೆ ಇರಬಹುದು ದಾರಿ ತಪ್ಪಿರಬಹುದು ಅಂತ ಹ್ಞೂಂ ಅಂದೆ. ಅದಕ್ಕೆ ಅವನು ನಾನು ಮಹಾರಾಷ್ಟ್ರದವನು, ಇಲ್ಲಿ ಕೂಲಿ ಮಾಡೋಕೆ ಬಂದಿದ್ದೆ, ಯಾರೋ ಹಣ ಕಳವು ಮಾಡಿದರು, ಎರಡು ಚಿಕ್ಕ ಮಕ್ಕಳು ಬೇರೆ ಇದಾವೆ, ನಿಮ್ಹತ್ರ ಬಹಳ ದುಡ್ಡು ಕೇಳ್ತಿಲ್ಲ, ಊಟಕ್ಕೆ ಸ್ವಲ್ಪ ದುಡ್ಡು ಕೊಡಿ ಎಂದ. ನಾನೇನೋ ಮಾತನಾಡಬೇಕೆಂದಿದ್ದೆ ಅಷ್ಟರೊಳಗೆ ಎಲ್ಲಿದ್ದಳೋ ಏನೋ ಅವನ ಹೆಂಡತಿ ಓಡಿ ಬಂದು ನನ್ನ ಮುಂದೆ ನಿಂತಳು. ನನಗೆ ಮೊದಲು ಕಂಡದ್ದು ಅವಳ ಕೊರಳಲ್ಲಿದ್ದ ಬಂಗಾರದ ನೆಕ್ಲೇಸು. ಆಮೇಲೆ ಕಂಡದ್ದು ಅವಳ ಸೊಂಟದ ಮೇಲಿದ್ದ ಮಗು. ಅದನ್ನು ನೋಡಿ ಇಲ್ಲವೆಂಬಂತೆ ಕೈ ಮಾಡಿ ಮುಂದೆ ಬಂದೆ.
ಮುಂದೆ ಬಂದು ಎರಡನೇ ರಸ್ತೆ ದಾಟಲು ನಿಂತಾಗ ಅದೇ ರೀತಿ ಕಥೆ ಹೇಳಿ ಅವನು ಒಬ್ಬ ಹುಡುಗಿಯ ಹತ್ತಿರ ದುಡ್ಡು ಕೇಳುತ್ತಿರುವುದು ನೋಡಿದೆ. ನಾನು ಈ ರೀತಿಯ ಸನ್ನೀವೇಶಗಳನ್ನು ಬಹಳಷ್ಟು ನೋಡಿದ್ದೇನೆ. ಮೂರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಇದ್ದಾಗ ಇಂತಹ ಯಾವುದೇ ಅನುಭವ ಆಗಿರಲಿಲ್ಲ. ಮೂರು ವರ್ಷ ಆದ ಮೇಲೆ ಬೆಂಗಳೂರಿಗೆ ಬಂದಾಗ ಇಂತಹ ಸಾಲು ಸಾಲು ಅನುಭವಗಳು ಆಗಿ ಸ್ವಲ್ಪ ದುಡ್ಡು ಕಳೆದುಕೊಂಡಿದ್ದೆ. ಈ ಜನರ ಹಿಂದೆ ಒಂದು ಸಂಘಟನೆಯಿದೆಯೇ ಎಂಬ ಸಣ್ಣ ಸಂಶಯ ಆಗಾಗ ಬಂದು ಹೋಗುತ್ತದೆ. ಈ ಸಂಶಯಕ್ಕೆ ಕಾರಣ ನನ್ನ ಗಮನಕ್ಕೆ ಬಂದ ಇಂತಹ ಎಲ್ಲ ಸನ್ನಿವೇಶಗಳ ಸ್ಕ್ರಿಪ್ಟ್ ಒಂದೇ ಆಗಿದೆ. ಹಿಂದಿ ಬರುತ್ತಾ ಎಂಬ ಪ್ರಶ್ನೆಯಿಂದ ಶುರುವಾಗುವ ಸಂಭಾಷಣೆ ಒಂದು ನಿಮಿಷದೊಳಗೆ ದುಡ್ಡು ಬೇಕು ಅನ್ನುವದರೊಂದಿಗೆ ಕೊನೆಯಾಗುತ್ತದೆ. ಅವರು ಸದಾ ಎಲ್ಲೋ ಕಳೆದುಕೊಂಡವರಂತೆಯೇ ಇರುತ್ತಾರೆ. ಎಲ್ಲಿಗೂ ಹೋಗದ ದಾರಿಯೊಂದರಲ್ಲಿ ಸಿಕ್ಕಿಬಿದ್ದವರಂತೆ.
ಇದು ಹೇಗೆ ಹುಟ್ಟಿಕೊಂಡಿತು, ಏಕೆ ಹುಟ್ಟಿಕೊಂಡಿತು ಗೊತ್ತಿಲ್ಲ. ನಗರ ಬೆಳೆದಷ್ಟು ಶೋಷಣೆಯ ದಾರಿಗಳು, ವಿಧಾನಗಳೂ ಬೆಳೆಯುತ್ತವೆಯೇ? ಗೊತ್ತಿಲ್ಲ. ಮೊನ್ನೆ ಒಂದು ಕರೆ ಬಂದಿತ್ತು “ನಿಮ್ಮ ಎಟಿಎಂ ಕಾರ್ಡ ಬ್ಲಾಕ್ ಆಗಿದೆ” ಅಂತ. ನನಗೆ ಈ ಜಾಲದ ಅರಿವು ಇದ್ದದ್ದರಿಂದ ಅವನಿಗೆ “ಬೋಸಡಿಕೆ ಕಾಲ್ ರಕ್” ಎಂದು ಸಿಟ್ಟಿನಿಂದ ಬೈದುಬಿಟ್ಟಿದ್ದೆ. ನಾನು ಅವನಿಗೆ ಬೈದಿದ್ದು ಬೇಜಾರು ತರಿಸಿದರೂ ಇಂತಹ ಶೋಷಣೆಗಳು ನನ್ನಲ್ಲಿ ಜಿಗುಪ್ಸೆ ತರಿಸಿತ್ತು. ಈ ಜನಕ್ಕೆ ಮೈ ಮುರಿದು ದುಡಿದು ಬದುಕೋದಕ್ಕೆ ಏನು ರೋಗ ಅಂತ. ಬೇರೆಯವರು ಕಷ್ಟ ಪಟ್ಟು ದುಡಿದ ದುಡ್ಡನ್ನು ಕಬಳಿಸಿ ಇವರಿಗೆ ಯಾವ ಸುಖ ಸಿಗುತ್ತದೆ ಅಂತ. ಬಹುಶಃ ಈ ಕಷ್ಟ ಸುಖ ಕೇವಲ ನಮ್ಮಂತವರಿಗೆ ಮಾತ್ರ ಅನಿಸುತ್ತೆ. ಬದುಕಲು ಸರಿ ತಪ್ಪು ವಿಧಾನಗಳು ಇಲ್ಲವೇನೋ. ಇದ್ದರೂ ಅವು ನಮಗೆ ನಾವೇ ಹಾಕಿಕೊಂಡ ತಡೆಗೋಡೆಗಳೇನೋ, ಗೊತ್ತಿಲ್ಲ.
ನಾನು ಎರಡನೆಯ ರಸ್ತೆ ದಾಟಿ ರೂಮಿನ ಹಾದಿ ಹಿಡಿದಾಗ ದುಡ್ಡು ಕೇಳಿದ ಆ ವ್ಯಕ್ತಿ ನನ್ನನ್ನು ಸ್ವಲ್ಪ ದೂರದವರೆಗೆ ಹಿಂಬಾಲಿಸಿತು. ನನಗೆ ಸ್ವಲ್ಪ ಭಯವಾಯಿತು. ಆದಷ್ಟು ವೇಗದಿಂದ ನಡೆದೆ. ಸ್ವಲ್ಪ ದೂರ ನಡೆದ ಮೇಲೆ ಹಿಂದೆ ತಿರುಗಿ ನೋಡಿದೆ. ಅವನು ನನ್ನ ಹಿಂಬಾಲಿಸುತ್ತಿಲ್ಲ ಎಂದು ಖಾತ್ರಿಯಾದ ಮೇಲೆ ಸಮಾಧಾನವಾಯಿತು. ರಸ್ತೆಯುದ್ದಕ್ಕೂ ನಾ ನೋಡಿದ ಎಲ್ಲ ಆಕ್ಷನ್ ಸಿನೆಮಾಗಳನ್ನು ರಿವೈಂಡ್ ಮಾಡಿದೆ. ಬೆಂಗಳೂರಂತ ವಿದ್ಯಾವಂತ ಊರಲ್ಲಿ ಭಯ ಎನ್ನುವುದು ಬಹಳ ಆಳವಾಗಿ ಕಾಡುತ್ತದೆ. ದೊಡ್ಡ ನಗರದಲ್ಲಿ ಯಾವುದೋ ಒಂದು ರಸ್ತೆಯಲ್ಲಿ ಒಂಟಿಯಾಗಿ ನಡೆದುಕೊಂಡು ಹೋಗುತ್ತಿರುವಾಗ “ನಾನ್ಯಾರು?” ಎಂಬ ಪ್ರಶ್ನೆ ಹುಟ್ಟಿಸುವ ಭಯ ಅಷ್ಟಿಷ್ಟಲ್ಲ.




BEST.............................................................................................SIMPLY BEST